ಲಕ್ಷಾಂತರ ಮನೆಗಳಲ್ಲಿ ದಿನಚರಿಯ ಭಾಗವಾಗಿರುವ ಧಾರಾವಾಹಿಗಳ ಕುರಿತು ಆಳವಾದ ಚರ್ಚೆಗಳು ನಡೆಯುವುದು ವಿರಳ. ನಮ್ಮ ದೇಶದಲ್ಲಿ ಸಿನಿಮಾಗಳಿಗಿಂತ ಎರಡು ಪಟ್ಟು ಹೆಚ್ಚು ಬಂಡವಾಳ ಆಕರ್ಷಿಸುವ ಹಾಗೂ ಹೆಚ್ಚಿನ ಜನರಿಗೆ ಉದ್ಯೋಗ ಒದಗಿಸುವ ಧಾರಾವಾಹಿಗಳ ಬಗ್ಗೆ ನಮಗೆಷ್ಟು ಗೊತ್ತು? ಗೊತ್ತಿರುವ ಸಂಗತಿಗಳಲ್ಲಿ ಎಷ್ಟು ವಾಸ್ತವಕ್ಕೆ ದೂರವಾದ ಪೂರ್ವಾಗ್ರಹಗಳು?
ಅತ್ತೆ ಸೊಸೆಯರ ಕಿತ್ತಾಟದ ವಿಷಯಗಳನ್ನು ದಾಟಿ ಇಂದಿನ ಧಾರಾವಾಹಿಗಳು ಮುಂದುವರೆದಿರುವ ಹಾದಿಯ ಪರಿಚಯ ನಿಮಗಿದೆಯೇ? ಎಲ್ಲರೂ ಜಪಿಸುವ ಟಿ ಆರ್ ಪಿ ಎನ್ನುವ ಮಂತ್ರದ ಹಿಂದಿರುವ ಗುಟ್ಟೇನು? ಈ ಮಾಪನ ಹೇಗೆ ಕೆಲಸ ಮಾಡುತ್ತದೆ?
ಧಾರಾವಾಹಿಗಳಲ್ಲಿ ಕಥೆ, ಚಿತ್ರಕಥೆ , ಸಂಭಾಷಣೆ ಬರೆಯುವ ಲೇಖಕರು ಹೇಗೆ ಕೆಲಸ ಮಾಡುತ್ತಾರೆ? ಅವರ ಬರವಣಿಗೆಯ ವ್ಯವಸ್ಥೆ ಹೇಗಿರುತ್ತದೆ? ಧಾರಾವಾಹಿಯ ಕಥೆಗಳು ಪ್ರಗತಿಪರವಾಗಿರುವುದಿಲ್ಲ ಎನ್ನುವ ಆರೋಪದಲ್ಲಿ ಹುರುಳಿದೆಯೇ? ವೀಕ್ಷಕರು ಧಾರಾವಾಹಿಗಳಲ್ಲಿ ಏನನ್ನು ನೋಡಲು ಬಯಸುತ್ತಾರೆ? ಎಂಬತ್ತು, ತೊಂಭತ್ತರ ದಶಕಗಳಲ್ಲಿ ರಾಜಕುಮಾರ್, ವಿಷ್ಣುವರ್ಧನ್ ರಂತಹ ನಟರು ಅಭಿನಯಿಸಿದ ಚಿತ್ರದ ಕಥೆಗಳನ್ನು ಈ ದಿನದ ಧಾರಾವಾಹಿಗಳು ಹೋಲುತ್ತವೆಯೇಕೆ?
ಹೀಗೆ ಹಲವು ಕುತೂಹಲಕರವಾದ ಪ್ರಶ್ನೆಗಳೊಂದಿಗೆ ನಾವು ಲೇಖಕ ಶ್ರೀನಿಧಿ.ಡಿ.ಎಸ್ ರೊಂದಿಗೆ ನಡೆಸಿದ ಚರ್ಚೆಯ ಮೊದಲ ಭಾಗ ಅರಳಿಕಟ್ಟೆಯ ಇಪ್ಪತ್ತೇಳನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.
ಚರ್ಚೆಯಲ್ಲಿ ಭಾಗವಹಿಸಿದವರು ಶ್ರೀನಿಧಿ.ಡಿ.ಎಸ್, ಮುಕುಂದ್ ಸೆತ್ಲೂರ್, ವಾಸುಕಿ ರಾಘವನ್ ಹಾಗೂ ಸುಪ್ರೀತ್.ಕೆ.ಎಸ್.
Credits: Music: Crescents by Ketsa Licensed under creative commons. Icon made by Freepik from www.flaticon.com