Listen

Description

ಈಲಾನ್ ಮಸ್ಕ್ ಹೆಸರು ಈಗ ಜನಜನಿತವಾಗಿದೆ. ಇದಕ್ಕೆ ಕಾರಣ ಆತ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಎಂಬ ಮನ್ನಣೆಗೆ ಪಾತ್ರನಾಗಿದ್ದು. ಕೆಲವರಿಗೆ ಆತನ ಟೆಸ್ಲಾ ಕಾರ್ ಕಂಪೆನಿಯ ಪರಿಚಯವಿರಬಹುದು. ಹಲವರಿಗೆ ಆತನ ಸ್ಪೇಸ್ ಎಕ್ಸ್ ಎಂಬ ರಾಕೆಟ್ ಕಂಪೆನಿಯ ಪರಿಚಯವಿರಬಹುದು.

ಆದರೆ ಆಧುನಿಕ ಎಡಿಸನ್ ಎಂದೇ ಕರೆಯಲ್ಪಡುವ ಈಲಾನ್ ಮಸ್ಕ್ ಒಬ್ಬ ವ್ಯಕ್ತಿಯಾಗಿ ಎಷ್ಟು ಜನರಿಗೆ ತಿಳಿದಿದ್ದಾನೆ? ವೈಯಕ್ತಿಕ ಜೀವನದಲ್ಲಿ ತನ್ನ ಕಾಲದ ಸರಕಾರದ ಮೂಗುತೂರಿಸುವಿಕೆಯಿಂದ ಕಿರಿಕಿರಿಗೊಳಗಾಗಿ ಕೆನಡಾದಿಂದ ದಕ್ಷಿಣ ಆಫ್ರಿಕಾಗೆ ವಲಸೆಹೋದ ಈಲಾನ್ ಮಸ್ಕ್ ತಾತನ ವ್ಯಕ್ತಿತ್ವ ಎಂಥದ್ದು? ಚಿಕ್ಕಂದಿನಲ್ಲೇ ಅಪ್ರತಿಮ ಬುದ್ದಿಮತ್ತೆಯ ಕಿಡಿ ಬೆಳಗಿದ ಆದರೆ ಕ್ರೂರ ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಒಳಗಾದ ಈಲಾನ್ ಬಾಲ್ಯ ಹೇಗಿತ್ತು?

ಮೊದಲ ಎರಡು ಸಾಫ್ಟ್ ವೇರ್ ಕಂಪೆನಿಗಳನ್ನು ಮಾರಿ ಕೋಟ್ಯಾಧಿಪತಿಯಾದ ಈಲಾನ್ ಆ ಎಲ್ಲ ಸಂಪತ್ತನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದು ಆಕಾಶದೆಡೆಗೆ ದೃಷ್ಟಿ ನೆಟ್ಟು ರಾಕೆಟ್ ನಿರ್ಮಿಸುವ ಕಂಪೆನಿ ಪ್ರಾರಂಭಿಸಿದಾಗ, ಸತ್ತು ಸತ್ತು ಬದುಕುಳಿದ ಟೆಸ್ಲಾ ಕಾರು ಕಂಪೆನಿಯ ನಿರ್ವಹಣೆ ಹೊತ್ತಾಗ.

ಸಣ್ಣ ಸೂಜಿಯಿಂದ ಹಿಡಿದು ಅತ್ಯಾಧುನಿಕ ಕಂಪ್ಯೂಟರ್ ಚಿಪ್ ವರೆಗೆ ಕೈಗಾರಿಕೆಗಳು ಅಮೇರಿಕಾದಿಂದ ಕಾಲ್ಕಿತ್ತ ಸಂದರ್ಭದಲ್ಲಿ ಈಲಾನ್ ಸ್ಪೇಸ್ ಎಕ್ಸ್ ಹಾಗೂ ಟೆಸ್ಲಾ ಎರಡೂ ಕಂಪೆನಿಗಳ ಸಮಸ್ತ ಉತ್ಪಾದನೆಯನ್ನು ಅಮೇರಿಕಾದಲ್ಲಿಯೇ ಸ್ಥಾಪಿಸಿದ. ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಹಾಗೂ ಮಧ್ಯ ಪ್ರಾಚ್ಯದಲ್ಲಿ ಕೊನೆಯಿಲ್ಲದ ಯುದ್ಧಗಳಿಗೆ ದಾರಿ ಮಾಡಿಕೊಡುವ ತೈಲದ ಅವಲಂಬನೆಯಿಂದ ಮನುಕುಲವನ್ನು ಮುಕ್ತಗೊಳಿಸುವ ಕನಸನ್ನು ಟೆಸ್ಲಾ ಮೂಲಕ ಸಾಕಾರ ಮಾಡಹೊರಟ. ಒಮ್ಮೆ ಬಳಸಿ ಬಿಸಾಡುವ ದುಬಾರಿ ರಾಕೆಟ್ ಗಳ ಬದಲಿಗೆ ಮರುಬಳಕೆಗೆ ಸಿದ್ಧವಾದ ರಾಕೆಟ್ ಗಳಿಂದ ಬಾಹ್ಯಾಂತರಿಕ್ಷವನ್ನು ಅನ್ವೇಷಿಸುವ ಮನುಕುಲದ ಆಕಾಂಕ್ಷೆಗೆ ಕುಮ್ಮಕ್ಕು ನೀಡಹೊರಟ. ಆಧುನಿಕ ಅನ್ವೇಷಣೆಗಳೆಲ್ಲ ಮುಗಿದು ಹೋದವು ಎನ್ನುವ ಮನಸ್ಥಿತಿಯ ಸಮಾಜದ ನಡುವೆ ಹೊಸತನ್ನು ಅರಸಿ ಹೊರಡುವುದು ಈಲಾನ್ ನ ಹಿರಿಮೆ. ಈಲಾನ್ ಮಸ್ಕ್ ಮುಖ್ಯವಾಗುವುದು ಈ ಕಾರಣಗಳಿಗಾಗಿ.

ಅಮೇರಿಕಾದ ಪತ್ರಕರ್ತ ಆಶ್ಲೀ ವ್ಯಾನ್ಸ್ ಬರೆದಿರುವ ಈಲಾನ್ ಮಸ್ಕ್ ಕುರಿತ ಅಧಿಕೃತ ಜೀವನ ಚರಿತ್ರೆ ಅರಳಿಕಟ್ಟೆಯ ನಲವತ್ತೈದನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. ಚರ್ಚೆಯಲ್ಲಿ ಭಾಗಬಹಿಸಿದವರು ಮುಕುಂದ್, ಸುಪ್ರೀತ್ ಹಾಗೂ ವಾಸುಕಿ.

Recording date: 26 December 2020

Credits: Music: Crescents by Ketsa Licensed under creative commons. Icon made by Freepik from www.flaticon.com