ತಮಗೆ ತಿಳಿಯದ ತಂತ್ರಜ್ಞಾನ, ವಿಜ್ಞಾನದ ಕುರಿತು ಎಲ್ಲರಿಗೂ ಆತಂಕ ಸಹಜ.ಅಣು ವಿಜ್ಞಾನ ಎಂದರೆ ಬಹುತೇಕರಿಗೆ ಕಣ್ಣ ಮುಂದೆ ಬರುವುದು ಅಣು ಬಾಂಬ್, ಇಲ್ಲವೇ ಉಕ್ರೇನಿನ ಚರ್ನೋಬಿಲ್ ಸ್ಥಾವರದ ಅವಘಡ. ಈ ಚಿತ್ರಿಕೆಗಳನ್ನು ಮೀರಿದ ವಾಸ್ತವ ಅಣು ವಿಜ್ಞಾನಕ್ಕಿದೆ. ಮುರಿದ ಮೂಳೆಯ ಎಕ್ಸ್ ರೇ ಮುದ್ರಿಕೆ, ಕ್ಯಾನ್ಸರ್ ಚಿಕಿತ್ಸೆ, ಬೀಜ ಸಂಸ್ಕರಣೆ, ವೈದ್ಯಕೀಯ ಉಪಕರಣಗಳ ಸೋಂಕು ತೆಗೆಯುವಿಕೆ, ಕೈಗಾರಿಕೆಗಳಲ್ಲಿ ದ್ರಾವಣಗಳ ಕಲೆಸುವಿಕೆಯನ್ನು ಅಳೆಯುವುದು, ಲೋಹದಲ್ಲಿನ ಸೂಕ್ಷ್ಮ ಸೀಳುಗಳನ್ನು, ವೆಲ್ಡಿಂಗ್ ಗುಣಮಟ್ಟವನ್ನು ಅಳೆಯುವುದು ಹೀಗೆ ಅಸಂಖ್ಯಾತ ಬಳಕೆಗಳನ್ನು ಅಣು ವಿಜ್ಞಾನ ಹೊಂದಿದೆ.
ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವಲ್ಲಿಯೂ ಪರಮಾಣು ಶಕ್ತಿಯ ಪಾತ್ರ ಬಗ್ಗೆ ಜಾಗತಿಕ ತಾಪಮಾನ ಏರಿಕೆಯ ಸಂದರ್ಭದಲ್ಲಿ ಮಹತ್ವದ್ದಾಗಿದೆ. ಒಂದು ಕಡೆ ಫ್ರಾನ್ಸ್ ತನ್ನ ಶೇ. ೭೦ರಷ್ಟು ವಿದ್ಯುಚ್ಛಕ್ತಿಯನ್ನು ಅಣುಶಕ್ತಿಯಿಂದ ಉತ್ಪಾದಿಸಿದರೆ ಪಕ್ಕದ ಜರ್ಮನಿ ತನ್ನೆಲ್ಲ ಅಣು ಸ್ಥಾವರಗಳನ್ನು ಮುಚ್ಚುವ ತಯಾರಿಯಲ್ಲಿದೆ. ರಷ್ಯಾದ ತೈಲ, ಅನಿಲದ ಮೇಲಿನ ಅವಲಂಬನೆ ಕೈಕಚ್ಚಿರುವಾಗ ತಮ್ಮ ನಿರ್ಧಾರವನ್ನು ಪುನರ್ವಿಮರ್ಶೆಗೆ ಒಡ್ಡಿದ್ದಾರೆ. ಭಾರತದಲ್ಲಿ ಕೇವಲ ಶೇ ೩ ರಷ್ಟು ವಿದ್ಯುಚ್ಛಕ್ತಿ ಅಣು ಸ್ಥಾವರಗಳಿಂದ ಲಭ್ಯವಾಗುತ್ತಿದೆ.
ಅಣು ವಿಜ್ಞಾನದ ಕುರಿತ ಇವೆಲ್ಲ ಮಗ್ಗುಲುಗಳ ಚರ್ಚೆಯನ್ನು ಅರಳಿಕಟ್ಟೆ ಬಾಬಾ ಅಣುವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ವಿಜ್ಞಾನಿ ಡಾ ಎಂ ಎಸ್ ಶ್ರೀನಿವಾಸ ಮೂರ್ತಿಯವರೊಂದಿಗೆ ನಡೆಸಿದೆ. ಚರ್ಚೆಯು ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು ಎರಡನೆಯ ಹಾಗೂ ಅಂತಿಮ ಭಾಗ ತೊಂಭತ್ತೆಂಟನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.
Recording date: 20 February 2022
Credits: Music: Crescents by Ketsa Licensed under creative commons. Icon made by Freepik from www.flaticon.com