ಕಲ್ಲುಗುಡ್ಡದ ಮೇಲಿನ ದೀಪಸ್ತಂಭ
---------------------------------------------
ಕಂಡುಕೊಳ್ಳುವುದು ಸುಲಭವಾಗಿರದೇ
ಎತ್ತಿಟ್ಟ ಒಂದೊಂದು ಹೆಜ್ಜೆಯಲ್ಲೂ
ಮೂಡಿದ ಅತಂತ್ರಗತಿ.
ಹೊಳೆವ ಚಂದ್ರನ ಹಿಡಿಯ ಹೋದ
ಹಕ್ಕಿ ಕೈ
ಯಳತೆಗೆ ನಿಲುಕದ ಬಿಂಬ
ಆ ದೀರ್ಘ ನಿಟ್ಟುಸಿರ ದಿನಗಳಲ್ಲಿ
ಉರಿಯ ಸುಡುಜ್ವಾಲೆಗೆ
ಬೆಂದ ಹೊತ್ತು..
ಕಂಡ ಕಲ್ಲುಗುಡ್ಡದ ಮೇಲಿನ ದೀಪಸ್ತಂಭ
ದಾರಿ ತೋರುತ್ತ ನಿಂತರೂ ನಿಶ್ಚಲ
ನಿಲುವು
ಕಣ್ಣುಗಳಲ್ಲಿ ಅರಳಿ ನಕ್ಕ ನಕ್ಷತ್ರ.
ಬೆಳಕಿನ ಆ ಚುಕ್ಕಿ ಹಚ್ಚಿದರಿವಿನ ಲಯಕ್ಕೆ
ಬದುಕೆಂಬ ಹಾಡಿಯಲಿ
ರಿಮ್ ಜಿಮ್.. ರಿಮ್ ಜಿಮ್
ತನನ.
ಒಂದೊಂದು ಹೆಜ್ಜೆಯಲ್ಲೂ ಮೂಡಿದ
ಹೊಸ ಗತಿ, ಹದಗೊಂಡ ಹುರುಪು
ಲೋಕದ ಸದ್ದಿಗೆ ನೂಪುರದ ಇಂಪೇ
ಹಿಮ್ಮೇಳವಾಗಿ
ಕೆಂಪುತುಟಿಗಳ ಓರೆನೋಟದಲ್ಲಿ
ಜಗದಿರುಳು ಮಂಪರಿನಲ್ಲಿ ಮುಳುಗಿ ಹೋದ ಹೊತ್ತು
ಆತ್ಮಮೀಟುವ ತಂತಿಯ ಹಿಡಿದು
ಬಂದಿದ್ದ ಅಂತರಾತ್ಮದ ಬುಡಬುಡಕೆಯವ.
ಗಿಣಿನುಡಿಸುವವನ
ಆಕಾಶದವಕಾಶದ ತತ್ವವದು ಪಾತಾಳ ಮರ್ಮ
ಹಕ್ಕಿ ಹೃದಯದಲ್ಲಿ ನೆಟ್ಟವು.
ಅರಿವಿನ ವ್ಯಸನಕ್ಕೆ
ಸುಡು ಸುಡು ಬೆಂಕಿಯಲಿ
ಹದವಾದ ಬೇಯುವಿಕೆ
ಸರಸವೂ ಮೋಕ್ಷದೊಲುಮೆಯ
ತೋರುವ ಕುಲು ಕುಲುಮೆ.
ನುಡಿದ ನುಡಿಸುತ್ತಲೇ ಹೋದ
ಹಕ್ಕಿಯ ಕೊರಳು, ಪಕ್ಕೆ, ಪಂಕಗಳು
ತಿಳಿವಿನ ಶೃತಿ ಹಿಡಿದು ಮೀಟಿ
ನಭದೆತ್ತರಕ್ಕೆ ಚಿಮ್ಮಿದ ರಾಗ
ಉರಿಸಿ, ದಹಿಸಿ ಮೂಡಿದಾ ಬೆಳಕು..
ಏಕಾಏಕಿ ಬಾನಂಗಳದಿ
ಕಾರ್ಮೋಡಗಳ ಮುಸುಕು
ಎದ್ದ ಕೋಲಾಹಲ
ಪ್ರಳಯದಾರ್ಭಟ, ರುದ್ರನರ್ತನ.
ಭಾವನೆಗಳು ಹೂತು
ಮೂಡಿಸಲಾಗದ ಎದೆಗಬ್ಬ ಸೋತು
ಭಾವದುಸಿರು ಬೋರಲಾಗಿ
ಬಡಿದ ಬಾಗಿಲಿಗಿಲ್ಲ ಕಿವಿ
ಸದ್ದು ಮಾಡುತ್ತಿಲ್ಲ ಎದೆಯ ಕುದಿ
ಕಳೆದುಕೊಂಡ ಒಣಎಲೆಗಳ ಮೇಲೆ ಮರಕ್ಕಿಲ್ಲ
ಮರುಕ.
ನಿಂತೇ ಇರುವುದಿನ್ನು ಹಕ್ಕಿಯ
ಜೊತೆ ನಿಶ್ಚಲ ಭೂಮಿ
ತೊನೆದು ತೂಗದ ಗೊನೆಬಾಳೆ ಮತ್ತು ಕ್ರಮಿಸದೇ ಹಾಗೇ
ಉಳಿದು ಹೋದ ಕಾಲುದಾರಿ