Listen

Description

ಅಣಿಮಾಂಡವ್ಯ

ಅಣಿಮಾಂಡವ್ಯ ಎನ್ನುವ ಬ್ರಹ್ಮರ್ಷಿಗಳ ಕಥೆಯನ್ನು ಕೇಳೋಣ ಅಣಿಮಾಂಡವ್ಯ ಋಷಿಗಳು ಒಮ್ಮೆ  ತಪೋರತ ರಾಗಿದ್ದಾಗ ಅವರ ಆಶ್ರಮಕ್ಕೆ ಕೆಲವು ಕಳ್ಳರು ಬಂದು ಅಲ್ಲಿಯೇ ಅಡಗಿಕೊಳ್ಳುತ್ತಾರೆ. ಧ್ಯಾನದಲ್ಲಿ ಲೀನರಾಗಿದ್ದ ಅಣಿಮಾಂಡವ್ಯರಿಗೆ ಇದರ ಪರಿವೆಯೇ ಇರುವುದಿಲ್ಲ. ಕಳ್ಳರನ್ನು ಹುಡುಕಿಕೊಂಡು ಬಂದ ರಾಜಭಟರು ಅಣಿಮಾಂಡವ್ಯರನ್ನು ಕೂಡ ಕಳ್ಳ ಎಂದು ತಿಳಿದು ರಾಜನ ಬಳಿ ಕರೆದುಕೊಂಡು ಹೋಗುತ್ತಾರೆ. ರಾಜನು ಅಣಿಮಾಂಡವ್ಯರನ್ನು ಗುರುತಿಸದೇ ಎಲ್ಲರನ್ನೂ ಶೂಲಕ್ಕೆ ಏರಿಸಲು ಆಜ್ಞಾಪಿಸುತ್ತಾನೆ. ಎಲ್ಲರೂ ಮೃತರಾದರೂ ಅಣಿಮಾಂಡವ್ಯರು ತಮ್ಮ ಯೋಗಶಕ್ತಿಯಿಂದ ಶೂಲದ ಮೇಲೆಯೇ ಧ್ಯಾನ ಮಗ್ನರಾಗುತ್ತಾರೆ. ಇದನ್ನು ತಿಳಿದ ರಾಜ ಆಣಿಮಾಂಡವ್ಯರ ಬಳಿಬಂದು ಕ್ಷಮೆಯನ್ನು ಯಾಚಿಸುತ್ತಾನೆ ಹಾಗೂ ಅಣಿಮಾಂಡವ್ಯರನ್ನು ಶೂಲದಿಂದ ಕೆಳಗಿಳಿಸುತ್ತಾರೆ. ಶೂಲದ ಒಂದು ಭಾಗ ಋಷಿಗಳ ಶರೀರದಲ್ಲಿಯೇ ಉಳಿದುಬಿಡುತ್ತದೆ.

ಶರೀರತ್ಯಾಗದ ನಂತರ ಯಮಲೋಕದಲ್ಲಿ ಯಮನ ಬಳಿ ಯಾವುದೇ ತಪ್ಪು ಮಾಡದ ನನಗೆ ಶಿಕ್ಷೆ ಏಕಾಯಿತು ಎಂದು ಪ್ರಶ್ನಿಸಿದಾಗ ಯಮ ’ನೀವು ಬಾಲ್ಯದಲ್ಲಿ ನಿಷ್ಕಾರಣವಾಗಿ ಒಂದು ಕೀಟವನ್ನು ಹಿಂಸಿಸಿದ್ದರಿಂದ ಈ ಶಿಕ್ಷೆ ನಿಮಗಾಯಿತು’ ಎಂದನು. ಬಾಲ್ಯದಲ್ಲಿ ತಿಳಿಯದೇ ಮಾಡಿದ ತಪ್ಪಿಗೆ ಘೋರ ಶಿಕ್ಷೆಯನ್ನು ಅನುಭವಿಸುವಂತೆ ಮಾಡಿದ ಯಮನಿಗೆ ನೀನು ಭೂಲೋಕದಲ್ಲಿ ಸೂತನಾಗಿ ಜನಿಸು ಎಂದು ಶಾಪವಿತ್ತರು. ಹೀಗೆ ಯಮ  ದ್ವಾಪರಯುಗದಲ್ಲಿ ವಿದುರನಾಗಿ ಜನಿಸಿದ ಎನ್ನಲಾಗುತ್ತದೆ. ಹಾಗಾಗಿಯೇ ಹದಿನಾಲ್ಕು ವರ್ಷಗಳಾಗುವವರೆಗೂ ಮಕ್ಕಳು ಮಾಡುವ ಪಾಪ ಅವರ ಪಾಲಕರದಾಗಿರುತ್ತದೆ ಎನ್ನುತ್ತಾರೆ.